ಯಂಗ್ ಇಂಡಿಯ - 
ಮಹಾತ್ಮ ಗಾಂಧೀಜಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಇಂಗ್ಲಿಷ್ ವಾರಪತ್ರಿಕೆ. ಪ್ರಥಮದಲ್ಲಿ ಮುಂಬಯಿಂದ ಹೊರಡುತ್ತಿದ್ದ ಈ ಪತ್ರಿಕೆಯ ಸ್ಥಾಪಕರು ಜಮುನಾದಾಸ್ ದ್ವಾರಕದಾಸ್, ಉಮರ್ ಸೋಬಾನಿ ಮತ್ತು ಶಂಕರಲಾಲ್ ಬ್ಯಾಂಕರ್. ಇವರ ವಿನಂತಿಯ ಮೇಲೆ ಪತ್ರಿಕೆಯನ್ನು ಗಾಂಧೀಜಿ ವಹಿಸಿಕೊಂಡರು. ಗಾಂಧೀಜಿಯವರ ಸಂಪಾದಕತ್ವದಲ್ಲಿ ಯಂಗ್ ಇಂಡಿಯ ವಾರಕ್ಕೆ ಎರಡು ಬಾರಿಯಂತೆ ಅರ್ಧಸಾಪ್ತಾಹಿಕವಾಗಿ 1919 ಅಕ್ಟೋಬರ್ 8 ರಿಂದ ಪ್ರಕಟವಾಗತೊಡಗಿತು. ಆಗ ಪತ್ರಿಕೆಯ ಬೆಲೆ ಒಂದು ಆಣೆ. ಮಹದೇವ ದೇಸಾಯಿ ಪ್ರಕಾಶಕರು ಮತ್ತು ಶಂಕರಲಾಲ್ ಬ್ಯಾಂಕರ್ ಅದರ ಮುದ್ರಕರಾಗಿದ್ದರು.

ಗಾಂಧೀಜಿಯವರ ಸಂಪಾದಕತ್ವದಲ್ಲಿ ಯಂಗ್ ಇಂಡಿಯ ಒಂದು ಹೊಸ ಆಯಾಮ ಪಡೆದು ಒಂದು ನಿರ್ದಿಷ್ಟ ಗತಿಯಲ್ಲಿ ಸಾಗಿತು. ಗಾಂಧೀಜಿ ಯಂಗ್ ಇಂಡಿಯ ಪತ್ರಿಕೆಯನ್ನು ಹಿಂದಿಯೇತರ ರಾಜ್ಯಗಳ ಓದುಗರಿಗಾಗಿ ಇಂಗ್ಲೀಷಿನಲ್ಲಿ ಪ್ರಕಟಿಸುತ್ತಿದ್ದರು. ರೌಲತ್ ಮಸೂದೆ ವಿರುದ್ಧ ಸತ್ಯಾಗ್ರಹ ಅಸ್ತ್ರದ ಬಳಕೆಯನ್ನು ಗಾಂಧೀಜಿ ಯಂಗ್ ಇಂಡಿಯ ಮೂಲಕ ಸಾರಿದರು. ಮೊದಲನೆಯ ಮಹಾಯುದ್ಧದ ಕಾರಣ ಮುದ್ರಣಯಂತ್ರ ಕಾಗದ ಮತ್ತಿತರ ಸಾಮಗ್ರಿಗಳು ತುಟ್ಟಿಯಾಗಿ ಗಾಂಧೀಜಿ ಯಂಗ್ ಇಂಡಿಯವನ್ನು ಮತ್ತೆ ಸಾಪ್ತಾಹಿಕವಾಗಿ ಪರಿವರ್ತಿಸಿದರು.

ಮುಂಬಯಿಯಿಂದ ಪ್ರಕಟವಾಗುತ್ತಿದ್ದ ಪತ್ರಿಕೆಯನ್ನು ಗಾಂಧೀಜಿ ಅಹಮದಾಬಾದಿನ ನವಜೀವನ ಮುದ್ರಣಾಲಯಕ್ಕೆ ವರ್ಗಾಯಿಸಿದರು. ಸಾರ್ವಜನಿಕ ಬೆಂಬಲದಿಂದ ಬೆಳೆದ ಮತ್ತು ಬೆಳೆಯುವ ಹಾಗೂ ಉಳಿಯುವ ಪತ್ರಿಕೆಯೇ ನಿಜವಾದ ಸಾರ್ವಜನಿಕ ವೃತ್ತಪತ್ರಿಕೆಯಾಗುತ್ತದೆ ಎಂಬುದು ಗಾಂಧಿಜಿಯವರ ಅಭಿಪ್ರಾಯವಾಗಿದ್ದು ತಮ್ಮ ಪತ್ರಿಕೆಗೆ ಜಾಹೀರಾತುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಈ ಪತ್ರಿಕೆಯ ಪ್ರಸಾರ ಮೊದಲು 1200 ಇದ್ದದ್ದು ಗಾಂಧೀಜಿ ನೇತೃತ್ವದಲ್ಲಿ ಇದರ ಪ್ರಸಾರ 10,000 ಕ್ಕೆ ಏರಿತು. ಈ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಭಾರತದ ಎಲ್ಲ ಪತ್ರಿಕೆಗಳೂ ಪೂರ್ವಾನುಮತಿ ಇಲ್ಲದೆ ಪ್ರಕಟಿಸಬಹುದಿತ್ತು. ಅನೇಕ ಭಾರತೀಯ ಪತ್ರಿಕೆಗಳು ಈ ವಿಶೇಷ ಅನುಮತಿಯನ್ನು ಪೂರ್ಣವಾಗಿ ಬಳಸಿಕೊಂಡವು.

ಗಾಂಧೀಜಿ ಸ್ವಾಂತಂತ್ರ್ಯ ಹೋರಾಟದಲ್ಲಿ ಮುಳುಗಿದ್ದರೂ ಪತ್ರಿಕೆಗಳಲ್ಲಿ ಬರೆಯುವುದನ್ನು ಎಂದೂ ಮರೆಯಲಿಲ್ಲ. ಬೇಸಾಯ, ರಾಜಕೀಯ, ಸಮಾಜ ಸೇವೆ, ಅಹಿಂಸೆ, ಹಿಂದೂ ಮುಸ್ಲಿಮ್ ಸಖ್ಯ, ಭಾರತೀಯ ಭಾಷೆಗಳು ಇವೇ ಮುಂತಾದ ವಿಷಯಗಳು ಯಂಗ್ ಇಂಡಿಯದಲ್ಲಿ ಪ್ರಕಟವಾಗುತ್ತಿದ್ದವು. ಓದುಗರ ಪತ್ರಗಳಿಗೂ ಈ ಪತ್ರಿಕೆಯಲ್ಲಿ ಅವಕಾಶವಿದ್ದು ಓದುಗರು ತಮ್ಮ ಟೀಕೆಗಳನ್ನು ನಿರ್ಭೀತಿಯಿಂದ ಯಂಗ್ ಇಂಡಿಯಕ್ಕೆ ಕಳುಹಿಸಬಹುದಿತ್ತು. ಅಸಹಕಾರ ಆಂದೋಳನದ ಸಮಯದಲ್ಲಿ ಯಂಗ್ ಇಂಡಿಯ ಪ್ರತಿವಾರ ಜೈಲುಗಳಿಗೆ ದೂಡಲ್ಪಟ್ಟವರ ಹೆಸರುಗಳನ್ನು ಪ್ರಕಟಿಸುತ್ತಿತ್ತು.
1922ರ ಮಾರ್ಚ್ 11 ರಂದು ಯಂಗ್ ಇಂಡಿಯ ಸಂಪಾದಕರಾದ ಗಾಂಧೀಜಿ ಮತ್ತು ಮುದ್ರಕರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆರು ವರ್ಷಗಳ ಕಾರಾಗೃಹ ವಾಸವನ್ನು ಗಾಂಧೀಜಿಯವರಿಗೆ ವಿಧಿಸಲಾಯಿತು. ಗಾಂಧೀಜಿಯವರ ಗೈರುಹಾಜರಿಯಲ್ಲಿ ಪತ್ರಿಕೆಯ ಪ್ರಸಾರ 3000 ಸಾವಿರಕ್ಕೆ ಇಳಿಯಿತು. 1924ರಲ್ಲಿ ಗಾಂಧೀಜಿಯವರ ಬಿಡುಗಡೆ ಆಯಿತು. ಅಲ್ಲಿ ಪುನಃ ಯಂಗ್ ಇಂಡಿಯ ಸಂಪಾದಕತ್ವವನ್ನು ಹೊತ್ತರು.

1930ರಲ್ಲಿ ಬ್ರಿಟಿಷ್ ಸರ್ಕಾರ ವಿಧಿಸಿದ ಉಪ್ಪಿನ ಮೇಲಿನ ಕರದ ವಿರುದ್ಧ ಪ್ರತಿಭಟಿಸಿ ಗಾಂಧೀಜಿ ಯಂಗ್ ಇಂಡಿಯದಲ್ಲಿ ಬರೆದರು. ಇತಿಹಾಸ ಪ್ರಸಿದ್ಧ ದಂಡೀಯಾತ್ರೆಯ ಕಾಲದಲ್ಲೂ ಪ್ರತಿದಿನ ಸಾಯಂಕಾಲ ಅವರು ಯಂಗ್ ಇಂಡಿಯಕ್ಕೆ ತಪ್ಪದೇ ಲೇಖನಗಳನ್ನು ಬರೆಯುತ್ತಿದ್ದರು.

ಸರ್ಕಾರ 1910ರ ಪತ್ರಿಕಾ ಶಾಸನವನ್ನು ಸುಗ್ರೀವಾಜ್ಞೆಯ ಮೂಲಕ 1930 ಏಪ್ರಿಲ್ 27 ರಂದು ಜಾರಿಗೆ ತಂದಿತು. ಸರ್ಕಾರ ಕೇಳಿದ ಭದ್ರತಾ ಠೇವಣಿಯನ್ನು ಕೊಡಲು ಗಾಂಧೀಜಿಯವರ ನವಜೀವನ ಮುದ್ರಣಾಲಯ ನಿರಾಕರಿಸಿತು. ಇದರಿಂದ ಮುದ್ರಣಾಲಯ ಮುಟ್ಟುಗೋಲಾಯಿತು. ಇದರ ಪರಿಣಾಮವಾಗಿ ಯಂಗ್ ಇಂಡಿಯ ಕಲ್ಲಚ್ಚಿನಲ್ಲಿ ಮುದ್ರಿತವಾಗಿ ಪ್ರಕಟವಾಗತೊಡಗಿತು.
ಗಾಂಧೀಜಿ ಮತ್ತು ವೈಸ್‍ರಾಯ್ ಲಾರ್ಡ್ ಇರ್ವಿನ್ನರ ನಡುವಿನ ಒಪ್ಪಂದದ ಫಲವಾಗಿ ಯಂಗ್ ಇಂಡಿಯ 1931 ಮಾರ್ಚ್ 13 ರಂದು ಮುದ್ರಿತ ಪ್ರಕಟಣೆಯನ್ನು ಪುನಃ ಆರಂಭಿಸಿತು.
 ದುಂಡುಮೇಜಿನ ಪರಿಷತ್ತು ಮುಗಿಸಿ ಭಾರತಕ್ಕೆ ಮರಳಿದ ಗಾಂಧೀಜಿಯವರನ್ನು ಬಂಧಿಸಲಾಯಿತು. ಅಂತಿಮವಾಗಿ ಯಂಗ್ ಇಂಡಿಯ ಪತ್ರಿಕೆಯನ್ನು 1932ರಲ್ಲಿ ನಿಲ್ಲಿಸಬೇಕಾಯಿತು.
(ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ